ಕನ್ನಡ ಚಿತ್ರರಂಗದಲ್ಲೊಂದು ಸ್ಪೆಷಲ್ ಟೀ
Posted date: 4/October/2010

ಮಾಮೂಲಿ ಫಾರ್ಮುಲಾ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕಿಂತ ಏನಾದರೂ ಹೊಸದನ್ನು ಮಾಡಬೇಕೆಂಬ ಹಂಬಲ ಇಟ್ಟುಕೊಂಡು ಇಲ್ಲೊಂದು ಸ್ನೇಹಿತರ ತಂಡ ಟೀ  ಹೆಸರಿನ ಚಲನಚಿತ್ರವನ್ನು  ನಿರ್ಮಿಸಿದೆ.  ಇದರ ವಿಶೇಷ ಏನೆಂದರೆ ಇಡೀ ಚಿತ್ರದಲ್ಲಿರುವುದು ಒಬ್ಬನೇ ಕಲಾವಿದ ಹಾಗೂ ಸಂಪೂರ್ಣ ಚಿತ್ರದಲ್ಲಿರುವುದು ಟೀ ಎನ್ನುವ ಒಂದೇ ಒಂದು ಮಾತು. ಚಿತ್ರದ ಏಕೈಕ ಕಲಾವಿದನಾಗಿ ಅಭಿನಯಿಸಿರುವ ರಮೇಶ್ ಹಾಗೂ ನಿರ್ದೇಶಕ ದುರ್ಗಾಪ್ರಸಾದ್ ಆತ್ಮೀಯ ಸ್ನೇಹಿತರು.  ರಮೇಶ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಮುಗಿಸಿದ್ದು ರಾಜ್ಯದ ಹಲವೆಡೆ ಕರಾಟೆ ತರಗತಿಗಳನ್ನು ನಡೆಸಿದ್ದಾರೆ.

    ಈ ಥರದ ಪ್ರಯತ್ನ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎನ್ನುತ್ತಾರೆ.  ಈ ಚಿತ್ರದ ನಿರ್ದೇಶಕ ದುರ್ಗಾಪ್ರಸಾದ್ ಕಾಡು ಮನುಷ್ಯನೊಬ್ಬನ ಸುತ್ತ ಹೆಣೆದಿರುವ ಈ ಚಿತ್ರವನ್ನು ನಿರ‍್ಮಿಸಿರುವವರು ಶ್ರೀಮತಿ ಶ್ಯಾಮಲಾ ರಮೇಶ್ ೨ ಗಂಟೆಗಳ ಅವಧಿಯ ಈ ಚಿತ್ರವನ್ನು ಶೃಂಗೇರಿ ಫಾರೆಸ್ಟ್ ಸಿರಿಮನೆಪಾಲ್ಸ್ ಕೊಂಡಗೇರಿ ಕಲ್ಕಟ್ಟೆ, ಶ್ರೀರಂಗಪಟ್ಟಣ ಹಾಗೂ ಕೈಮನೆ ಅರಣ್ಯದಲ್ಲಿ ೧೫ ದಿನಗಳ ಕಾಲ ಚಿತ್ರಿಕರಿಸಲಾಗಿದೆ.  ಇಡೀ ಚಿತ್ರವನ್ನು ೧೭೭ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು ಗೋವಾದಲ್ಲಿ ನಡೆಯುವ ಚಲನಚಿತ್ತೋತ್ಸವ ಅಲ್ಲದೆ ಉಳಿದೆಲ್ಲಾ ಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲು ಚಿತ್ರತಂಡ ಉತ್ಸುಕವಾಗಿದೆ.  ಮತ್ತೊಂದು ವಿಶೇಷವೆಂದರೆ ಈ ಚಿತ್ರಕ್ಕೆ ಯಾವುದೇ ಕೃತಕ ಬೆಳಕಿನ ಪರಿಕರಗಳನ್ನು (ಲೈಟಿಂಗ್ಸ್) ಉಪಯೋಗಿಸದೆ ನೈಜ ಬೆಳಕಿನಲ್ಲೇ ಚಿತ್ರೀಕರಿಸಿರುವುದು.

    ಕಾಡಿನ ಪರಿಸರದಲ್ಲೇ ಬೆಳೆದ ಮಾನವನೊಬ್ಬ ಒಮ್ಮೆ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದನ್ನು ನೋಡುತ್ತಾನೆ.  ಆ ಮನೆಯೊಳಗೆ ಪ್ರವೇಶಿಸಿ ಅಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನೆಲ್ಲಾ ಒಂದೊಂದಾಗಿ ಬಳಕೆ ಮಾಡುವುದನ್ನು ಕಲಿಯುತ್ತಾ ನಾಗರೀಕ ಮಾನವನಾಗಿ ಬದಲಾಗುತ್ತಾ ಹೋಗುತ್ತಾನೆ.  ಒಂದು ಸಂದರ್ಭದಲ್ಲಿ ಮನೆಗೆ ಬೆಂಕಿ ಹತ್ತಿ ಉರಿದು ಹೋಗುತ್ತದೆ. ನಿರಾಶ್ರಿತನಾದ ಆ ಮನುಷ್ಯ ಅಲೆಯುತ್ತಾ ಗ್ರಾಮವೊಂದನ್ನು ಪ್ರವೇಶಿಸಿ ಪುಟ್ಟ ಟೀ ಅಂಗಡಿ ಮುಂದೆ ನಿಲ್ಲುತ್ತಾನೆ.  ಅಲ್ಲಿ ಗ್ರಾಹಕನೊಬ್ಬ ಅಂಗಡಿ ಮಾಲೀಕನಿಗೆ ಟೀ ಎಂದು ಕೇಳುತ್ತಿರುವುದನ್ನು ನೋಡಿದ ಈತ ಕೂಡ ಟೀ ಎನ್ನುತ್ತಾನೆ.

    ಇಡೀ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾವ ಭಾವದ ಮೂಲಕವೇ ಕಥೆಯನ್ನು ಹೇಳಲಾಗಿದೆ. ಈಗಾಗಲೇ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಸಂಪರ್ಕಿಸಿರುವ ಚಿತ್ರತಂಡ ಗಿನ್ನೀಸ್ ದಾಖಲೆ ಗೆ ಈ ಚಿತ್ರವನ್ನು ಸೇರಿಸಲು ಪ್ರಯತ್ನ ನಡೆಸಿದೆ.  ಇದುವರೆಗೆ ಮಾತಿಲ್ಲದ ಚಿತ್ರ ಏಕ ಕಲಾವಿದ ಅಭಿನಯಿಸಿರುವ ಚಿತ್ರಗಳು ಬಂದಿದ್ದರೂ ಈ ಎರಡೂ ವಿಶೇಷತೆಗಳನ್ನು ಒಂದೇ ಚಿತ್ರದಲ್ಲಿ ಅಳವಡಿಸುವಂಥ ಪ್ರಯತ್ನವನ್ನು ನಾವು ಮಾಡಿದ್ದೇವೆ ಎನ್ನುವ ನಿರ್ದೇಶಕ ದುರ್ಗಪ್ರಸಾದ್ ಹಾಗೂ ರಮೇಶ್ ಈ ಚಿತ್ರವನ್ನು ಸಿ.ಡಿ., ಡಿ.ವಿ.ಡಿ. ಮೂಲಕ ಈ ಸಿನಿಮಾ ವೀಕ್ಷಕರ ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed